ಯಶವಂತರಾವ್, ಹೋಳ್ಕರ್
? - 1811. ಇಂದೂರ್ ಸಂಸ್ಥಾನವನ್ನು ಆಳಿದ ಹೋಳ್ಕರ್ ಮನೆತನದ ಒಬ್ಬ ಪ್ರಸಿದ್ಧರಾಜ. ಅಹಲ್ಯಾಬಾಯಿ ಹೋಳ್ಕರ್ ರಾಣಿಯ ಆಡಳಿತದಲ್ಲಿ ಸೇನಾಪತಿಯಾಗಿದ್ದ ತುಕೋಜೀರಾವ್ ಹೋಳ್ಕರ್ ಈತನ ತಂದೆ. ತುಕೋಜಿರಾವ್ ಮರಣ ಹೊಂದಿದ ಅನಂತರ ಇಂದೂರ್ ಸಂಸ್ಥಾನ ಜ್ಞಾತಿಗಳ ಕಲಹದಲ್ಲಿ ಶಿಂಧೆ ಮನೆತನದ ಕಾರಭಾರಿ ಸರ್ಜೀರಾವ್‍ಘಾಡಗೆ ವಶವಾಯಿತು. ಹೋಳ್ಕರ್ ಸಹೋದರರು ಅತ್ತಿ ಇತ್ತ ಓಡಿಹೋದರು. ಆ ಸಂದರ್ಭದಲ್ಲಿ ಯಶವಂತರಾವ್ ನಾಗಪುರಕ್ಕೆ ಹೋದ. ಶಿಂಧ್ಯಾನ ಹೇಳಿಕೆಯ ಪ್ರಕಾರ ನಾಗಪುರದಲ್ಲಿದ್ದ ಭೋಸ್ಲೆ ದೊರೆ ಯಶವಂತರಾವ್ ಹೋಳ್ಕರನನ್ನು ಸೆರೆಹಿಡಿದ. ಆರು ತಿಂಗಳ ಕಾಲ ಸೆರೆಯನುಭವಿಸಿ ಯುಕ್ತಿಯಿಂದ ಒಂದು ದಿನ ಸೆರೆಮನೆಯಿಂದ ಪಾರಾಗಿ ಖಾನದೇಶಕ್ಕೆ ಓಡಿಹೋದ. ಅಲ್ಲಿ ಇವನಿಗೆ ಒಬ್ಬ ಭಿಲ್ಲ ಸರದಾರನ ಆಶ್ರಯ ದೊರಕಿತು. ಆದರೆ ಅಲ್ಲಿ ಇವನಿಗೆ ನಿಲ್ಲಲಾಗಲಿಲ್ಲ. ಅಲ್ಲಿಂದ ವಡವಾಣಿ ಮೂಲಕ ಧರಾ ನಗರಕ್ಕೆ ತಲುಪಿದ. ಅಲ್ಲಿದ್ದ ಆನಂದರಾವ್ ಪವಾರ್ ಈತನನ್ನು ಆದರಾತಿಥ್ಯಗಳಿಂದ ನೋಡಿಕೊಂಡ. ಆದರೆ ಶಿಂಧ್ಯ ಇವನನ್ನು ಇಟ್ಟುಕೊಳ್ಳದ ಹಾಗೆ ಆನಂದರಾವನಿಗೆ ಭೀತಿ ತೋರಿಸಿದ. ಇದೇ ಸಮಯದಲ್ಲಿ ಪೆಂಡಾರಿಗಳು ಧಾರಾನಗರಕ್ಕೆ ಮುತ್ತಿಗೆ ಹಾಕಿದ್ದರು. ಆದರೆ ಯಶವಂತರಾವ್ ಅವರನ್ನು ಸೋಲಿಸಿ ಧಾರಾ ನಗರವನ್ನು ರಕ್ಷಿಸಿದ. ಶಿಂಧ್ಯಾನ ದುರ್ನಡತೆಯನ್ನು ಕಂಡು ಧಾರಾನಗರ ಬಿಟ್ಟು ದೇಪಾಳಪುರಕ್ಕೆ ಹೋಗಿ ಅದನ್ನು ಲೂಟಿಮಾಡಿದ. ಇದರಿಂದ ಇವನ ಪ್ರಸಿದ್ಧಿ ಹೆಚ್ಚಿತು.

	ಸಾಕಷ್ಟು ಶಕ್ತಿವಂತನಾದರೂ ಯಶವಂತರಾವ್ ತಾನು ಹೋಳ್ಕರನ ಸರ್ವ ಸಂಪತ್ತಿಗೆ ಬಾಧ್ಯಸ್ಥ. ಹಕ್ಕುದಾರ ಎಂದು ಹೇಳದೆ ಮಲ್ಹಾರಿರಾವ್ ಹೋಳ್ಕರನ ಪುತ್ರ ಖಂಡೆರಾಯನ ಕೈವಾರಿಯೆಂದು ಹೇಳಿಕೊಂಡು ವಿನಯವನ್ನು ಮೆರೆದ. ಸಾರಂಗಪುರ, ಕಸರಾಬಾದ, ಡುಡ್ರನೇಕ ಮುಂತಾಗಿ ಹಲವು ಮಂಡಲಗಳನ್ನು ಗೆದ್ದು ಕೊಂಡ. ತನ್ನ ಸೈನ್ಯವನ್ನು ಯೂರೋಪಿಯನ್ ಅಧಿಕಾರಿಗಳ ಮೂಲಕ ತರಬೇತಿ ಪಡೆಯುವಂತೆ ಮಾಡಿದುದಲ್ಲದೆ ಡಾಡ್ ಹಾಗೂ ಪ್ಲಮೇಟ್ ಎಂಬ ಅಧಿಕಾರಿಗಳ ನೇತೃತ್ವದಲ್ಲಿ ಎರಡು ಬ್ರಿಗೇಡ್ ಸೈನ್ಯವನ್ನು ನಿಲ್ಲಿಸಿದ್ದ ಮಹೇಶ್ವರ ನಗರವನ್ನು ಗೆದ್ದು ಅಲ್ಲಿನ ಖಜಾನೆಯನ್ನು ಲೂಟಿಮಾಡಿ ಸೈನ್ಯಕ್ಕೆ ಸಂಬಳ ಹಂಚಿದ. ನರ್ಮದಾ ನದಿ ತೀರದಲ್ಲಿ ಬಿಡಾರದಲ್ಲಿದ್ದಾಗ ತನ್ನದೇ ಬಂದೂಕಿನ ನಳಿಕೆಯೊಡೆದು ಗುಂಡುಹಾರಿ ಒಂದು ಕಣ್ಣನ್ನು ಕಳೆದುಕೊಂಡನಾದರೂ ಧೈರ್ಯಗೆಡದೆ ಮುಂದಕ್ಕೆ ಸೈನ್ಯವನ್ನು ನಡೆಸಿ ನೇವಾಸ, ಮಾಳವ ಪ್ರಾಂತ್ಯಾಧಿಕಾರಿಗಳನ್ನು ಸೋಲಿಸಿ ಅವರಿಂದ ಖಂಡನೆ ವಸೂಲು ಮಾಡಿದ. ಅನಂತರ ಶಿಂಧ್ಯಾನ ರಾಜ್ಯದ ಮೇಲೆ ದಾಳಿ ಮಾಡಿದ. ಆ ಕಾಲದಲ್ಲಿ ಶಿಂಧ್ಯಾ ಪುಣೆಯಲ್ಲಿದ್ದ ಮತ್ತು ಆತನ ದಂಡ ನಾಯಕ ಲಖಚ್ ದಾದಾ ಆಗ್ರಾ ಕೋಟೆಗೆ ಮುತ್ತಿಗೆ ಹಾಕಿದ್ದ. ಇದೇ ಸಮಯದಲ್ಲಿ ಯಶವಂತರಾವ್ ಹೋಳ್ಕರನ ಸೋದರ ವಿಠೋಜಿಯನ್ನು ಪುಣೆಯಲ್ಲಿ ಪೇಶ್ವೆ ಸೆರೆ ಹಿಡಿದು ಆನೆಯ ಕಾಲಿನಿಂದ ತುಳಿಸಿ ಕೊಲ್ಲಿಸಿದ. ಈ ಹೇಯಕೃತ್ಯವನ್ನು ಸಹಿಸದೆ ಯಶವಂತರಾವ್ ಪೇಶ್ವೆ ಮನೆತನದ ಮೇಲೆ ದ್ವೇಷವನ್ನು ತಳೆದು ಮನಸ್ಸಿನಲ್ಲಿ ಮಚ್ಚರವಿಟ್ಟ. ಇತ್ತ ದೌಲತ್‍ರಾವ್ ಶಿಂಧ್ಯಾ, ಹೋಳ್ಕರನ ಮುತ್ತಿಗೆಯ ಸುದ್ದಿಯನ್ನು ಕೇಳಿ ತನ್ನ ರಾಜ್ಯದತ್ತ ನಡೆದ ಮೇಜರ್ ಜಾರ್ಜ್ ಹೆಸ್ಸಿಂಗನಿಗೆ ಉಜ್ಜಯನಿಯನ್ನು ಗೆಲ್ಲಲು ಕಳಿಸಿದ. 1801ರ ಜುಲೈ ತಿಂಗಳಲ್ಲಿ ಯುದ್ಧವಾಗಿ ಆ ಯುದ್ಧದಲ್ಲಿ ಹೆಸ್ಸಿಂಗನಿಗೆ ಪೂರ್ಣ ಸೋಲಾಯಿತು. ಆದರೆ ದೌಲತ್‍ರಾವ್ ಶಿಂಧ್ಯಾ ಇಂದೂರನ್ನು ಮುತ್ತಿ ಯಶವಂತರಾವ್ ಹೋಳ್ಕರನನ್ನು ಸೋಲಿಸಿದ. ಆಗ ಯಶವಂತರಾವ್ ಇಂದೂರ್ ಬಿಟ್ಟು ರಜಪುತಾನಕ್ಕೆ ಓಡಿಹೋದ. ಅಲ್ಲಿಂದ ಖಾನದೇಶಕ್ಕೆ ಹೋಗಿ, ಅನಂತರ ಪುಣೆಯನ್ನು ಹಿಡಿದುಕೊಂಡು ಪೇಶ್ವೆಯನ್ನು ಸೋಲಿಸಿದ. ಪೇಶ್ವೆ ಇಂಗ್ಲಿಷರ ಕಡೆಗೆ ಸಂಧಿಯನ್ನು ನಿರ್ಣಯಿಸಿಕೊಂಡರು. ಶಿಂಧ್ಯಾ ಹಾಗೂ ಇಂಗ್ಲಿಷರ ಮಧ್ಯೆ ಯುದ್ಧಗಳು ಜರುಗಿದವು. ಆಗ ಯಶವಂತರಾವ್ ತಟಸ್ಥವಾಗಿ ನಿಂತ. ಒಂದು ವೇಳೆ ಯಶವಂತರಾವ್ ಶಿಂಧ್ಯನ್ ಜೊತೆಗೆ ಹೊಂದಿಕೊಂಡು ಅಂದು ಇಂಗ್ಲಿಷರನ್ನು ಎದುರಿಸಿದ್ದರೆ ಭಾರತದ ಇತಿಹಾಸವೇ ಬೇರೆ ರೂಪವನ್ನು ತಾಳುತ್ತಿತ್ತು. ಶಿಂಧ್ಯಾ ಹಾಗೂ ಭೋಸ್ಲೆಯ ಜೊತೆಗೂಡುವೆನೆಂದು ಮಾತುಕೊಟ್ಟು ಅವರೊಡನೆ ಸೇರದೆ ವಚನಭ್ರಷ್ಟನಾದ.

	ಶಿಂಧ್ಯಾ ಹಾಗೂ ಭೋಸ್ಲೆ ಇಬ್ಬರೂ ಇಂಗ್ಲಿಷ್ ಸೈನ್ಯದೊಂದಿಗೆ ಯುದ್ಧಮಾಡಿ ಸೋತ ಮೇಲೆ ಹೋಳ್ಕರ್ ಇಂಗ್ಲಿಷರೊಡನೆ ಯುದ್ಧಮಾಡಿದ. ಆರಂಭದಲ್ಲಿ ಕರ್ನಲ್ ಮೋನ್‍ಸನ್ ಎಂಬ ಅಧಿಕಾರಿಯನ್ನು ಸೋಲಿಸಿದರೂ ಇಂಗ್ಲೀಷರ ಕೈಮೇಲಾಯಿತು. ಆಗ ಈತನ ಸಹಾಯಕ್ಕೆ ಯಾರೂ ಬರಲಿಲ್ಲ. ಈತ ಪಂಜಾಬಿನ ರಣಜಿತ್‍ಸಿಂಗನ ಸಹಾಯವನ್ನು ಕೋರಿದನಾದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಲಾರ್ಡ್‍ಲೇಕನಿಗೆ ಶರಣಾಗತನಾದ. ಇಂಗ್ಲಿಷರು ಇವನನ್ನು ಪುನಃ ಇಂದೂರ್ ಸಮಸ್ಥಾನಕ್ಕೆ ಅಧಿಪತಿಯನ್ನಾಗಿ ಮಾಡಿದರು. ಈ ಸಂದರ್ಭದಲ್ಲಿ ಇಂದೂರಿನಲ್ಲಿ ಹಲವು ರಾಜಕೀಯ ಕೊಲೆಗಳಾಗಿದ್ದವು. ಯಶವಂತರಾವ್ ಹೋಳ್ಕರನಿಗೆ ಹುಚ್ಚು ಹಿಡಿಯಿತು. 20 - 10 1811ರಂದು ಬಂಬೂರಾ ಗ್ರಾಮದಲ್ಲಿ ನಿಧನ ಹೊಂದಿದ. ಇವನನ್ನು ಪ್ರತ್ಯಕ್ಷ ನೋಡಿದ ಗ್ರಾಂಟ್‍ಥಪ್ `ವಿಲಕ್ಷಣ ಮನುಷ್ಯ, ಅತ್ಯಂತ ಧೈರ್ಯಶಾಲಿ, ಬಲಿಷ್ಠ, ಮರಾಠಿ ಹಾಗೂ ಪಾರಸಿ ಭಾಷೆಗಳಲ್ಲಿ ವಿದ್ವಾಂಸ ಎಂದು ಮುಂತಾಗಿ ವರ್ಣಿಸಿದ್ದಾನೆ.
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ